ಅಂಗನವಾಡಿ ಮಕ್ಕಳಿಗೂ ಕ್ಷೀರ ಭಾಗ್ಯ: ಸಚಿವ ಸಂಪುಟದಲ್ಲಿ ಅನುಮೋದನೆ

0
524

 
ವರದಿ: ಲೇಖಾ
ಕ್ಷೀರ ಭಾಗ್ಯ ಯೋಜನೆಯ ಅಡಿಯಲ್ಲಿ ಇತರೆ ಮಕ್ಕಳಿಗೆ ನೀಡುತ್ತಿರುವಂತೆಯೇ ರಾಜ್ಯದ 39 ಲಕ್ಷ ಅಂಗನವಾಡಿ ಮಕ್ಕಳಿಗೂ ವಾರಕ್ಕೆ ಮೂರು ದಿನ 150 ಮಿಲಿ ಲೀಟರ್ ಕೆನೆ-ಭರಿತ ಹಾಲು ವಿತರಿಸಲು ರಾಜ್ಯ ಸಚಿವ ಸಂಪುಟವು ಅನುಮೋದನೆ ನೀಡಿದೆ.
 
 
 
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ವಿಧಾನಸೌಧದಲ್ಲಿ ನಡೆದ ರಾಜ್ಯ ಸಚಿವ ಸಂಪುಟ ಸಭೆಯ ನಂತರ ಸಭಾ ನಿರ್ಣಯಗಳನ್ನು ಬಹಿರಂಗಪಡಿಸಿದ ಸಣ್ಣ ನೀರಾವರಿ, ಕಾನೂನು ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಟಿ. ಬಿ. ಜಯಚಂದ್ರ ಅವರು ಈ ಯೋಜನೆಗೆ 42.5 ಕೋಟಿ ರೂ ವೆಚ್ಚ ಭರಿಸಲಾಗುವುದು. ಸಂಪುಟದ ಈ ತೀರ್ಮಾನದಿಂದ ಅಂಗನವಾಡಿ ಮಕ್ಕಳನ್ನೊಳಗೊಂಡಂತೆ ಒಂದರಿಂದ ಹತ್ತನೇ ತರಗತಿಯ 1.08 ಕೋಟಿ ಮಕ್ಕಳಿಗೆ ಕೆನೆ-ಭರಿತ ಹಾಲು ದೊರೆಯಲಿದೆ ಎಂದರು.
 
 
 
ಪ್ರಸಕ್ತ ಸಾಲಿನಲ್ಲಿ ರಸಗೊಬ್ಬರ ದಾಸ್ತಾನು ಮಾಡಲು ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಂಡಳಕ್ಕೆ 600 ಕೋಟ ರೂ ಸಾಲ ಪಡೆಯುವ ಸಲುವಾಗಿ ಪ್ರತಿ ಖಾತರಿ ನೀಡಲು ಸಚಿವ ಸಂಪುಟ ಸಮ್ಮತಿಸಿತು.
 
 
ಕರ್ನಾಟಕ ರಾಜ್ಯ ಉಗ್ರಾಣ ನಿಗಮದ 182 ಉಗ್ರಾಣಗಳ ಮೇಲ್ಛಾವಣಿಯಲ್ಲಿ ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ ಸೌರ ವಿದ್ಯುತ್ ಪ್ಯಾನೆಲ್‍ಗಳನ್ನು ಅಳವಡಿಸಿ 162 ಮೆಗಾ ವಾಟ್ ವಿದ್ಯುತ್ ಉತ್ಪಾದಿಸುವ ಯೋಜನೆಯಡಿ ಮೊದಲನೇ ಹಂತದಲ್ಲಿ 68 ಮೆಗಾ ವಾಟ್ ವಿದ್ಯುತ್ ಉತ್ಪಾದಿಸುವ ಯೋಜನೆಗೆ ಸಂಪುಟ ಒಪ್ಪಿಗೆ ನೀಡಿದೆ. ಇದರಿಂದ ಉತ್ಪಾದಿಸುವ ಪ್ರತಿ ಯೂನಿಟ್ ವಿದ್ಯುತ್‍ಗೆ 9-56 ರೂ ನಂತೆ ಖರೀದಿಸಲೂ ಸಮ್ಮತಿಸಲಾಗಿದೆ ಎಂದು ಜಯಚಂದ್ರ ಅವರು ಹೇಳಿದರು.
 
 
 
ಸಾರ್ವಜನಿಕ ವಿತರಣಾ ವ್ಯವಸ್ಥೆಯಲ್ಲಿ ಜನಸಾಮಾನ್ಯರಿಗೆ ವಿತರಿಸುವ ಐಯೋಡಿನ್‍ಯುಕ್ತ ಉಪ್ಪಿನೊಂದಿಗೆ ಇದೀಗ ಕಬ್ಬಿಣಾಂಶಯುಕ್ತ ಉಪ್ಪನ್ನೂ ಒದಗಿಸಲು ಸಂಪುಟ ನಿರ್ಣಯಿಸಿತು.
 
 
ಶಿವಮೊಗ್ಗದಲ್ಲಿ ನೂತನ ಕಾರಾಗೃಹ ಕಟ್ಟಡ ಹಾಗೂ ಸಿಬ್ಬಂದಿಯ ವಸತಿ ಸಮುಚ್ಛಯವನ್ನು 79.76 ಕೋಟಿ ರೂ ವೆಚ್ಚದಲ್ಲಿ ನಿರ್ಮಿಸಲು ಸಂಪುಟವು ಆಡಳಿತಾತ್ಮಕ ಅನುಮೋದನೆ ನೀಡಿತು.
 
 
 
ಸಂಸದೀಯ ವ್ಯವಹಾರಗಳ ಹಾಗೂ ಶಾಸನ ರಚನಾ ಇಲಾಖಾ ವ್ಯಾಪ್ತಿಯ ಭಾಷಾಂತರ ನಿರ್ದೇಶನಾಲಯದ ವೃಂದ ಹಾಗೂ ನೇಮಕಾತಿ ನಿಯಮಗಳು-2016 ಕರಡು ಅಧಿಸೂಚನೆಗೆ ಸಂಪುಟ ಒಪ್ಪಿಗೆ ಸೂಚಿಸಿದೆ ಎಂದು ಸಚಿವರು ಹೇಳಿದರು.
 
 
 
ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲ್ಲೂಕಿನ ಹಿಪ್ಪರಗಿ ಹಿನ್ನೀರಿನಿಂದ ಬಾಧಿತವಾಗಿರುವ ತಮದಡಿ ಗ್ರಾಮದ ಪುನರ್ವಸತಿ ನಿರ್ಮಾಣಕ್ಕಾಗಿ ಹಳಿಂಗಳಿ ಗ್ರಾಮದಲ್ಲಿ 89.34 ಎಕರೆ ಜಮೀನನ್ನು ಕರ್ನಾಟಕ ನೀರಾವರಿ ನಿಗಮದಿಂದ ಉಚಿತವಾಗಿ ನೀಡಲು ಸಂಪುಟ ಸಮ್ಮತಿಸಿದೆ.
 
 
 
ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದಿಂದ ನಡೆಸಲಾಗುತ್ತಿರುವ ವಸತಿ ಶಾಲೆಯ ವಿದ್ಯಾರ್ಥಿಗಳಿಗೆ ಸಿದ್ದಪಡಿಸಿದ ಸಮವಸ್ತ್ರಗಳನ್ನು ಕರ್ನಾಟಕ ಕೈ ಮಗ್ಗ ಅಭಿವೃದ್ಧಿ ನಿಗಮದಿಂದ ಖರೀದಿಸಿ ಒದಗಿಸಿರುವ ಬಾಬ್ತು 21.29 ಕೋಟಿ ರೂ ಗಳಿಗೆ ಸಂಪುಟವು ಘಟನೋತ್ತರ ಮಂಜೂರಾತಿ ನೀಡಿದೆ.

LEAVE A REPLY

Please enter your comment!
Please enter your name here