ಅಂಗನವಾಡಿ ಉತ್ಸವಕ್ಕೆ ಬಾಲ ತಾರೆಯರ ಮೆರಗು

0
1004
ಮಕ್ಕಳಿಗೆ ಪ್ರೋತ್ಸಾಹ ಅಭಿನಂದನೀಯ: ಚಂದ್ರಹಾಸ ದೇವಾಡಿಗ
ಅಜೆಕಾರು: ಅಂಗನವಾಡಿಗಳ ಸಬಲೀಕರಣ ಮತ್ತು ಅಲ್ಲಿನ ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಸೂಕ್ತ ವಾತಾವರಣ ಕಲ್ಪಿಸುವುದು ಇಂದಿನ ಅತ್ಯವಶ್ಯಕ ಕೆಲಸವಾಗಿದೆ. ರಾಜ್ಯದಲ್ಲಿಯೇ ವಿನೂತನವಾಗಿ ಅಂಗನವಾಡಿ ಉತ್ಸವ ಮಾಡುವ ಮೂಲಕ ಮಕ್ಕಳಿಗೆ ಪ್ರೋತ್ಸಾಹ ನೀಡುತ್ತಿರುವುದು ಅಭಿನಂದನೀಯ ವಿಷಯ ಎಂದು ಮೂಡುಬಿದಿರೆ ತುಳು ಕೂಟದ ಅಧ್ಯಕ್ಷ ಎಂ.ಚಂದ್ರಹಾಸ ದೇವಾಡಿಗ ಹೇಳಿದರು.
ಅವರು ಅಜೆಕಾರಿನ ರಾಮ ಮಂದಿರದಲ್ಲಿ ಶುಕ್ರವಾರ ನಡೆದ ಕುರ್ಸುಕಟ್ಟೆ ಅಂಗನವಾಡಿ ಉತ್ಸವ ಕಾರ್ಯಕ್ರಮವನ್ನು ಅಂಗನವಾಡಿ ಮಕ್ಕಳಿಗೆ ಕನ್ನಡದ ಶಾಲು ಹೊದಿಸಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಿದ್ದರು.
ಕಳೆದ ೨೫-೩೦ ವರ್ಷಗಳಿಂದ ಡಾ.ಶೇಖರ ಅಜೆಕಾರು ಅವರು ಮಕ್ಕಳನ್ನು ಮತ್ತು  ಪ್ರತಿಭಾವಂತ ಯುವಕರನ್ನು ಪ್ರೋತ್ಸಾಹಿಸುತ್ತಾ ಅವರಿಗೆ ವೇದಿಕೆ ಒದಗಿಸುತ್ತಾ ಬಂದಿದ್ದಾರೆ ಅಭಿನಂದನೀಯ ಎಂದು ದೇವಾಡಿಗ ಅವರು ಪ್ರಶಂಶಿಸಿದರು.
ಅಂಗನವಾಡಿ ಮಕ್ಕಳ ಮೇಳ, ಆದಿಗ್ರಾಮೋತ್ಸವ, ಅಖಿಲ ಕರ್ನಾಟಕ ಬೆಳದಿಂಗಳ ಸಮ್ಮೇಳನ ಮತ್ತು ಈಗ ಅಂಗನವಾಡಿ ಉತ್ಸವ ಹೀಗೆ ವಿನೂತನ, ಹೊಸ ಬಗೆಯ ಕಾರ್ಯಕ್ರಮಗಳ ಮೂಲಕ ಅಜೆಕಾರಿನ ಹೆಸರನ್ನು ವಿಶ್ವಮಟ್ಟಕ್ಕೆ ಪಸರಿಸಿರುವ ಡಾ. ಶೇಖರ ಅವರು ಊರಿಗೆ ಕೀರ್ತಿ ತಂದಿದ್ದಾರೆ. ಅದು ಗ್ರಾಮ ಪಂಚಾಯತ್ ಅಧ್ಯಕ್ಷನಾಗಿ ನಾನು ತುಂಬಾ ಹೆಮ್ಮೆ ಪಡುವ ವಿಷಯ ಎಂದು ಮರ್ಣೆ ಗ್ರಾಮ ಪಂಚಾಯತ್ ಅಧ್ಯಕ್ಷ ದಿನೇಶ. ಎಂ ಅಭಿಪ್ರಾಯ ಪಟ್ಟರು.
ಇಂತಹ ಕಾರ್ಯಕ್ರಮಗಳು ನಮಗೆಲ್ಲಾ ಹೆಮ್ಮೆ ತರುವ ಸಂಗತಿಗಳು. ಇಂತಹ ಉತ್ತಮ ಕಾರ್ಯಕ್ರಮಗಳನ್ನು ಆಸ್ವಾದಿಸಲು ಬರುವವರಿಗೂ ಪುಣ್ಯ ಬೇಕು ಎಂದು ಮುಖ್ಯ ಅತಿಥಿ ಡಾ.ಸಂತೋಷ್ ಕುಮಾರ್ ಹೇಳಿದರು.
ಪ್ರತಿಭಾನ್ವಿತ ಮಕ್ಕಳ ಕಾರ್ಯಕ್ರಮ ಎಲ್ಲರ ಮನ ಗೆಲ್ಲುತ್ತದೆ, ಅವರ ಭವಿಷ್ಯ ನಿರ್ಮಾಣದಲ್ಲಿ ಇಂತಹ ಕಾರ್ಯಕ್ರಮಗಳು ಪ್ರೋತ್ಸಾಹ ನೀಡುವ ಅಂಶಗಳಾಗಿವೆ ಎಂದು ಹಿರಿಯರಾದ ಶ್ರೀನಿವಾಸ ನಾಯಕ್ ಭಾಗವತರ ಬೆಟ್ಟು ನುಡಿದರು.
ಮಕ್ಕಳಿಗೆ ಅಂಗನವಾಡಿ ಮತ್ತು ಪೂರ್ವ ಪ್ರಾಥಮಿಕ ಹಂತದಿಂದಲೇ ಸ್ವಚ್ಚತೆಯ ಪಾಠ ಕಲಿಸಿದರೆ ಅವರು ಉತ್ತಮ ಮತ್ತು ಶಿಸ್ತು ಬದ್ಧ ಜೀವನವನ್ನು ನಡೆಸಲು ಪೂರಕವಾಗುತ್ತದೆ ಎಂದು ಅಜೆಕಾರು ಲಯನ್ಸ್ ಕ್ಲಬ್‌ನ ಕಾರ್ಯದರ್ಶಿ ಥಾಮಸ್ ಲೂಕಸ್ ಹೇಳಿದರು.
೧೬ ವರ್ಷಗಳ ಕಾಲ ಅಂಗನವಾಡಿ ಶಿಕ್ಷಕಿಯಾಗಿ ದುಡಿದ ಅನುಭವ ಬದುಕನ್ನು ಎದುರಿಸುವ ಪಾಠ ಕಲಿಸಿದೆ, ಅಂಗನವಾಡಿ ಉತ್ಸವ ನಾನು ಮೊದಲ ಬಾರಿ ಕೇಳಿದ್ದು ಎಂದು ಮಾಜಿ ತಾ.ಪಂ ಸದಸ್ಯೆ ಸುನೀತಾ ಶೆಟ್ಟು ಅಭಿಪ್ರಾಯ ಪಟ್ಟರು.
ಕಾರ್ಯಕ್ರಮ ಸಂಯೋಜಕ, ಹಿರಿಯ ಪತ್ರಕರ್ತ ಡಾ.ಶೇಖರ ಅಜೆಕಾರು ಅವರು ಮಾತನಾಡಿ ಪ್ರತಿ ಊರಿನಲ್ಲಿ ಅಂಗನವಾಡಿ ಮಕ್ಕಳಿಗೆ ವರ್ಷಕ್ಕೆ ಒಮ್ಮೆಯಾದರೂ ಇಂತಹ ಉತ್ಸವಗಳು ನಡೆಯಲಿ ಎಂದು ಹಾರೈಸಿದರು.
ರಾಜ್ಯದ ಗಮನಸೆಳೆದಿರುವ ಬೆಳ್ತಂಗಡಿ ಪೇರಿ ಅಂಗನವಾಡಿ ಹೊಸಂಗಡಿಯ ಶಿಕ್ಷಕಿ ಸುಕನ್ಯಾ ರಾವ್ ಅವರನ್ನು ಸನ್ಮಾನಿಸಲಾಯಿತು.
ಅಂಗನವಾಡಿ ಶಿಕ್ಷಕಿ ಶಕುಂತಳಾ ಮತ್ತು ಸಹಾಯಕಿ ಥೆರಸಾ ತಾವ್ರೋ ಅತಿಥಿಗಳನ್ನು ಗೌರವಿಸಿದರು. ಖ್ಯಾತ ಬಾಲ ಕಲಾವಿದೆ ಮಜಾಭಾರತ ಕಲಾವಿದೆ ಆರಾಧನಾ ಭಟ್ ನಿಡ್ಡೋಡಿ ಕಾರ್ಯಕ್ರಮ ನಿರೂಪಿಸಿದರು. ಅಂಗನವಾಡಿಯ ಹಳೆ ವಿದ್ಯಾರ್ಥಿನಿ ಸಿಂಚನಾ ಕಾಬೆಟ್ಟು ಸ್ವಸ್ತಿವಾಚನ ಮಾಡಿದರು. ಸೌಮ್ಯಶ್ರೀ ವಂದಿಸಿದರು.
ಝಿಟಿವಿ ಸರಿಗಮಪ ಲಿಟ್ಲ್ ಚಾಂಪ್ ಖ್ಯಾತಿಯ ಕ್ಷತಿ ರೈ ಧರ್ಮಸ್ಥಳ, ಡ್ರಾಮಾ ಜ್ಯೂನಿಯರ್ ವಿಜೇತೆ ಸೃಷ್ಟಿ ಶೆಟ್ಟಿ ರೆಂಜಾಳ, ವಿವಿಧ ಚಾನೆಲ್‌ಗಳಲ್ಲಿ ಮಿಂಚುತ್ತಿರುವ ಶೃಜನ್ಯ ಜೆ.ಕೆ. ಹೋಮಲ್ಕೆ ಬೆಳುವಾಯಿ, ಸಂಕೇತ್ ಆಚಾರ್ಯ ಮರಿಯಾಡಿ ಮೂಡುಬಿದಿರೆ, ಮಾನ್ವಿ ಎಂ.ಜೈನ್ ಮೂಡುಬಿದಿರೆ, ಭರತನಾಟ್ಯ ಕಲಾವಿದೆ ವಿಜಯಶ್ರೀ ಕಾಡುಹೊಳೆ ಅವರು ಕಾರ್ಯಕ್ರಮಗಳನ್ನು ನೀಡಿದರು. ಅವರೊಂದಿಗೆ ಆರಾಧನಾ ಭಟ್ ಸಾಧನೆಯ ಮಾತುಕತೆ  ನಡೆಸಿದರು.
ಅಂಗನವಾಡಿ ಶಾಲೆ ಕುರ್ಸುಕಟ್ಟೆ, ಪೇರಿ, ಅಜೆಕಾರು ಪೇಟೆ, ಮೆಥಡ್ಸ್ ಡ್ಯಾನ್ಸ್ ಕ್ಲಾಸ್ ಅಜೆಕಾರು ಇಲ್ಲಿನ ಮಕ್ಕಳು ವೈವಿಧ್ಯಮಯ ಕಾರ್ಯಕ್ರಮ ನೀಡಿದರು. ಸುನಿಧಿ, ಸುನಿಜ ಮತ್ತು ಸಿಂಚನಾ ಪ್ರಾರ್ಥಿಸಿದರು.
ಉದಯ ಎ ಅವರು ಭಕ್ತಿ ಸಂಗೀತ ಕಾರ್ಯಕ್ರಮ ನೀಡಿದರು. ವಿಶೇಷ ಆಹ್ವಾನಿತರಾಗಿ ನಿವೃತ್ತ ಶಿಕ್ಷಕ ಮೌರಿಸ್ ತಾವ್ರೋ, ಕಬಡ್ಡಿ ಆಟಗಾರ ಜಗದೀಶ ಶೆಟ್ಟಿ, ಉದ್ಯಮಿ ತಂಬಿನಮಕ್ಕಿ ರಾಖೇಶ್ ಶೆಟ್ಟಿ, ಕವಿ ಅಜೆಕಾರು ಬಾಲಕೃಷ್ಣ ಹೆಗ್ಡೆ, ಸಂಘಟನಾ ಸೇವಾ ನಿರತರಾದ ಶಂಕರ ಆಚಾರ್ಯ, ಸೌಮ್ಯಶ್ರೀ ಅಜೆಕಾರು, ಶಶಿಕಲಾ ಜೆ.ಕೋಟ್ಯಾನ್ ಬೆಳುವಾಯಿ,  ಕವಿತಾ ಮರಿಯಾಡಿ, ಅಜೆಕಾರು ಅಂಗನವಾಡಿ ಶಿಕ್ಷಕಿ ಬೆನಿಡಿಕ್ಟಾ, ಗಣೇಶ ಹೆಗ್ಡೆ , ಮಂಜುನಾಥ ಕಾಡುಹೊಳೆ  ಮೊದಲಾದವರು ಉಪಸ್ಥಿತರಿದ್ದರು.
ವಿಶೇಷಗಳು:
* ೮ ಮಂದಿ ಕಲಿಯುತ್ತಿರುವ ಬೆಳ್ಳಿ ಹಬ್ಬ ಪೂರೈಸಿರುವ ಅಂಗನವಾಡಿ ಶಾಲೆಗೆ ಹೀಗೆ ಅಂಗನವಡಿ ಉತ್ಸವದ ಸಂಭ್ರಮ
* ದೂರದ ಬೆಳ್ತಂಗಡಿ ತಾಲೂಕಿನ ಪೇರಿ ಅಂಗನವಾಡಿ ಶಾಲೆಯ ಮಕ್ಕಳು ಉತ್ತಮ ನೃತ್ಯ ನೀಡಿ ಗಮನಸೆಳೆದರು. ಹೆತ್ತವರ ಒಂದು ದೊಡ್ಡ ತಂಡ ಆಗಮಿಸಿ ಕಾರ್ಯಕ್ರಮಕ್ಕೆ ಸಾಕ್ಷಿಯಾಯಿತು.
* ಭರತನಾಟ್ಯ, ಸಂಗೀತ, ಮಾತುಗಾರಿಕೆ, ನೃತ್ಯ, ಸ್ವಸ್ತಿ ವಾಚನ ಎಲ್ಲವೂ ಉತ್ತಮವಾಗಿ ಮೂಡಿ ಬಂತು.
* ಕನ್ನಡದ ಶಾಲು ಹೊದಿಸಿ ಉದ್ಘಾಟನೆ, ಎಲ್ಲಾ ಅಂಗನವಾಡಿ ಮಕ್ಕಳಿಗೂ ಕನ್ನಡದ ಶಾಲು ಹೊದಿಸಿ ಗೌರವಿಸಲಾಯಿತು.
* ತುಂಬಾ ಕಡಿಮೆ ಅವಧಿಯ ಸಭಾ ಕಾರ್ಯಕ್ರಮ ವಿಶೇಷವಾಗಿತ್ತು.
* ಮಕ್ಕಳಿಗೆ ಹಾಲು, ಬಿಸ್ಕತ್ ಊಟದ ವ್ಯವಸ್ಥೆ ಇತ್ತು.
* ಆಹ್ವಾನಿತ ಮಕ್ಕಳ ತಂದೆ ತಾಯಿ ಕುಟುಂಬಿಕರು ಸರಿಯಾದ ಸಮಯಕ್ಕೆ ಆಗಮಿಸಿ ಖುಷಿ ಪಟ್ಟರು.

LEAVE A REPLY

Please enter your comment!
Please enter your name here