Headlines

ಒತ್ತಡ ನಿರ್ವಹಣೆಗೆ ಆದ್ಯತೆ ಅವಶ್ಯ * ಬೆಳದಿಂಗಳ ಸಮ್ಮೇಳನಾಧ್ಯಕ್ಷತೆಗೆ ಬನ್ನಂಜೆ ಆಯ್ಕೆ * ಕಥೋಲಿಕ್ ಸಮಾಜೋತ್ಸವ * ಅಶ್ವತ್ಥಪುರದಲ್ಲಿ ಡಾ.ಸುಧೀರ್ ಹೆಗ್ಡೆ ನೇತೃತ್ವದಲ್ಲಿ ನೇತ್ರ ಚಿಕಿತ್ಸೆ ಶಿಬಿರ * ರೋಟರಿಯಿಂದ ಗಣರಾಜ್ಯೋತ್ಸವ ಆಚರಣೆ * ರಾಷ್ಟ್ರೀಯ ಐಕ್ಯತೆಗೆ ಯುವಪಡೆ ಸಿದ್ಧವಾಗಲಿ: ವಿನಯ ಹೆಗ್ಡೆ * ಮಹಾಮಜ್ಜನಕ್ಕೆ ಸಿದ್ದತೆ ಪೂರ್ಣ * ಶ್ರೀಬಾಹುಬಲಿ ಅಹಿಂಸಾದಿಗ್ವಿಜಯಂ ಲೋಕಾರ್ಪಣೆ * ಲೋಕಾಯುಕ್ತ ಪ್ರವಾಸ * ರೋಟರಿಯಿಂದ ಸಾಧಕರಿಗೆ ಸನ್ಮಾನ * ಸ್ವರಾಜ್ಯ ಮೈದಾನದ ಮೇಲೆ ತೂಗುಗತ್ತಿ…! * ಡಾ.ಸುಧೀರ್ ಹೆಗ್ಡೆ ನೇತೃತ್ವದಲ್ಲಿಕಣ್ಣಿನತಪಾಸಣಾ ಶಿಬಿರ * ಯುವಶಕ್ತಿಗೆ ಪರಿಸರಪ್ರಜ್ಞೆಯ ಅರಿವು ಮೂಡಿಸಿದ ಮಹಾಕಾರ್ಯ * ಮೂಡಬಿದಿರೆ ಶಿಕ್ಷಣ ಪ್ರೇಮಿಗಳ ನಾಡು: ಅಭಯಚಂದ್ರ ಜೈನ್ * 50ನೇ ವೈದ್ಯಕೀಯ ತಪಾಸಣಾ ಶಿಬಿರ * ಜ.21-25: ಮೂಡಬಿದಿರೆಯಲ್ಲಿ ರಾಷ್ಟ್ರೀಯ ವೈಯ್ಟ್ ಲಿಫ್ಟಿಂಗ್ * ರಾಜ್ಯಮಟ್ಟದ ಟಿ-20 ಕ್ರಿಕೆಟ್ ಟೂರ್ನಿ: ಆಳ್ವಾಸ್‍ಗೆ ಪ್ರಶಸ್ತಿ * ಕವಿಕುಲಗುರು ಕುಮಾರವ್ಯಾಸ * ಆಳ್ವಾಸ್ ಕಾಲೇಜಿನ ವಿದ್ಯಾರ್ಥಿಗಳಿಂದ ಒಡ್ಡು ನಿರ್ಮಾಣ * ಕಣ್ಣಿನ ಉಚಿತ ತಪಾಸಣೆಹಾಗೂ ಚಿಕಿತ್ಸಾ ಶಿಬಿರ *

ಕವಿಕುಲಗುರು ಕುಮಾರವ್ಯಾಸ

#kannada#sangha#kantavara

ಮೂಡಬಿದಿರೆ: ಕನ್ನಡದ ವರಕವಿ ದ.ರಾ. ಬೇಂದ್ರೆಯವರು ಕುಮಾರವ್ಯಾಸ ಭಾರತವನ್ನು ‘ಪ್ರತಿಪರ್ವ ರಸೋದಯ’ ವೆಂದು ಕೊಂಡಾಡಿದ್ದಾರೆ. ‘ಕಬ್ಬಿನ ಕೋಲಿನ ಕೆಲವೊಂದು ಗಂಟುಗಳಲ್ಲಾದರೂ ರಸವಿಲ್ಲದೆ ಇರಬಹುದು. ಆದರೆ ಗದುಗಿನ ಭಾರತ ಹಾಗಲ್ಲ’ ಎನ್ನುವುದು ಈ ಮಾತಿನ ಅರ್ಥ. ‘ಚಾರುಕವಿತೆ’ಯನ್ನು ಬಳಸದೆ ‘ಕಾವ್ಯಕೆ ಗುರುವೆನಲು’ ರಚಿಸಿದ ಕುಮಾರವ್ಯಾಸನ ಪ್ರತಿಭೆ ಶಬ್ದ, ಅರ್ಥ ಮತ್ತು ಪ್ರಮಾಣಗಳೆಂಬ ಮೂರೂ ಆಯಾಮಗಳಲ್ಲಿ ಕಾವ್ಯ ಶಕ್ತಿಯನ್ನು ಎತ್ತಿಹಿಡಿದಿದೆ. ಪುಂಖಾನುಪುಂಖವಾಗಿ ಸಾಗುವ ಪದಪ್ರಯೋಗಗಳಲ್ಲಿ ತುಂಬಿದ ನಾದಮಯತೆ, ಅರ್ಥಪ್ರತೀತಿ ಹಾಗೂ ಭಾಮಿನಿ ಷಟ್ಪದಿಯ ಛಂದೋ ಬಂಧದಲ್ಲಿ ಸಾಧ್ಯವಾಗುವ ಲಯರಂಗಿತತೆಯ ಲಾಸ್ಯವೈವಿಧ್ಯ ಅವನನ್ನು ‘ಕವಿಕುಲಗುರು’ ವನ್ನಾಗಿಸಿದೆ ಎಂಬುದಾಗಿ ಖ್ಯಾತ ವಿದ್ವಾಂಸರೂ, ಶತಾವಧಾನಿಗಳೂ ಆಗಿರುವ ಡಾ. ಕಬ್ಬಿನಾಲೆ ವಸನ್ತ ಭಾರದ್ವಾಜ ತಿಳಿಸಿದರು. ಕಾಂತಾವರ ಕನ್ನಡ ಸಂಘದಲ್ಲಿ 2018ರ ವರ್ಷಪೂರ್ತಿ ಪ್ರತಿ ತಿಂಗಳು ನಡೆಯಲಿರುವ ಕುಮಾರವ್ಯಾಸನ ಕಾವ್ಯರಸಗ್ರಹಣ ಕಾರ್ಯಕ್ರಮದ ಉದ್ಘಾಟನಾ ರೂಪದ ‘ಕವಿಕುಲಗುರು ಕುಮಾರವ್ಯಾಸ’ ಎಂಬ ಮೊದಲ ಉಪನ್ಯಾಸದಲ್ಲಿ ಮಾತನಾಡಿದರು.
ಕುಮಾರವ್ಯಾಸನ ‘ಕರ್ಣಾಟಕ ಭಾರತ ಕಥಾಮಂಜರಿ’ ಯನ್ನು ‘ಗದುಗಿನ ಭಾರತ’ ಎಂದೇ ಕರೆಯಲಾಗುತ್ತದೆ. ಹತ್ತು ಪರ್ವಗಳ ಈ ಕಾವ್ಯವು ‘ಶ್ರವಣಸುಧಾವಿನೂತನ ಕಥನ’ ಎಂಬ ಹೆಗ್ಗಳಿಕೆಯ ಕಾವ್ಯವಾಗಿದ್ದು ಗಮಕಕಲೆಯ ಮೂಲಕ ಅದನ್ನು ಕೇಳಿ ಆನಂದಿಸುವುದು ಕನ್ನಡದ ಒಂದು ವಿಶೇಷ ಸಂಸ್ಕೃತಿ. ಹೀಗೆ ಕೇಳುವ ಸಂಸ್ಕೃತಿಯಿಂದ ಕಾವ್ಯದ ರಸಗ್ರಹಣ ಗರಿಗೆದರುತ್ತದೆ. ಕೇಳುಗನ ಸ್ವೋಪಜ್ಞವಾದ ಚಿತ್ರಗಳು ತಾನಾಗಿಯೇ ಮೂಡುತ್ತವೆ. ಇದು ದೃಶ್ಯಮಾಧ್ಯಮಗಳಲ್ಲಿ ಅಸಾಧ್ಯವಾದ ಅನುಭವವೆಂಬುದನ್ನು ಗಮನಿಸಬಹುದು. ಮಹಾಭಾರತದ ಕಥಾವಸ್ತುವನ್ನು ಸಮಸಾಮಯಿಕ ಚಿಂತನೆಗಳಿಂದ ಅಲಂಕರಿಸಿರುವುದು ಕುಮಾರವ್ಯಾಸನ ಹಿರಿಮೆಯಾಗಿದೆ. ರಾಜನೀತಿಯ ಕೌಟಿಲ್ಯ, ಶೀಲಾಶ್ಲೀಲದ ಪರಿಧಿಯನ್ನು ಮೀರಿದ ದೇಸಿ, ಸಾಮಾಜಿಕ ಮೌಲ್ಯಗಳ ಚಿಂತನೆ ಮುಂತಾದವುಗಳನ್ನು ಅವನಂತೆ ಚಿತ್ರಿಸಿದ ಮತ್ತೊಬ್ಬ ಕವಿಯಿಲ್ಲ.
ಕುಮಾರವ್ಯಾಸ ಭಾರತ ನವರಸಭರಿತ ಮಹಾಕಾವ್ಯ, ರುಚಿವೈವಿಧ್ಯ ಅದರ ಶ್ರೇಷ್ಠತೆ, ಭಾಷೆಯನ್ನು ದುಡಿಸಿಕೊಳ್ಳುವಲ್ಲಿ ಆತನದು ಎತ್ತಿದ ಕೈ. ಅಜರ್ುನನಿಗೆ ಶ್ರೀಕೃಷ್ಣನು ವಿಶ್ವರೂಪವನ್ನು ತೋರಿಸಿದಂತೆಯೇ ಕುಮಾರವ್ಯಾಸನು ನಮಗೆ ಕನ್ನಡ ಭಾಷೆಯ ವಿರಾಟ್ ಸ್ವರೂಪವನ್ನು ತೋರಿಸಿದ್ದಾನೆ. ಕನ್ನಡ ಭಾಷೆಯ ಚೆಲುವನ್ನು ಆಸ್ವಾದಿಸಬೇಕಾದರೆ ಗದುಗಿನ ಭಾರತವನ್ನು ಓದಬೇಕು. ಗದುಗಿನ ಭಾರತದ ಕಥನಶೈಲಿಯೆಂದರೆ ಅನೇಕರೀತಿಯ ಮನುಷ್ಯ ವರ್ತನೆಯ ಭಂಡಾರ. ಕುಮಾರವ್ಯಾಸ ಭಾರತವು ವಿವಿಧ ಪಾತ್ರಗಳ ವಿಭಿನ್ನ ಸ್ವರೂಪದ ಮನಸ್ಸು, ಮಾತು, ಮಾರ್ಗ ಮೌಲ್ಯಗಳನ್ನು ಕಟ್ಟಿಕೊಡುವ ನಿಜವಾದ ಅರ್ಥದ ಮಹಾಕಾವ್ಯವಾಗಿದೆ ಎಂದರು.
ಪ್ರಾರಂಭದಲ್ಲಿ ಗಮಕ ಕಲಾಪರಿಷತ್ತಿನ ಉಡುಪಿ ಜಿಲ್ಲಾಧ್ಯಕ್ಷರಾಗಿರುವ ಗಮಕಿ ಸತೀಶ್ ಕುಮಾರ್ ಕೆಮ್ಮಣ್ಣು ಅವರಿಂದ ಕುಮಾರವ್ಯಾಸ ಭಾರತದ ಆಯ್ದ ಪದ್ಯಗಳ ಗಮಕ ವಾಚನ ನೆರವೇರಿತು ಮತ್ತು ಕನ್ನಡ ಪುಸ್ತಕ ಪ್ರಾಧಿಕಾರದಿಂದ ಯುವ ಬರಹಗಾರರ ಚೊಚ್ಚಲ ಕೃತಿ ಪ್ರೋತ್ಸಾಹ ಧನಕ್ಕೆ ಆಯ್ಕೆಯಾಗಿ ಪ್ರಕಟಗೊಂಡ ಇಂದುಚೇತನ ಬೋರುಗುಡ್ಡೆಯವರ ‘ಮುರಳಿಗಾನ’ ಕವನ ಸಂಕಲನವನ್ನು ಡಾ. ವಸನ್ತ ಭಾರತದ್ವಾಜರು ಲೋಕಾರ್ಪಣೆಗೊಳಿಸಿದರು. ಉಪನ್ಯಾಸಕರು ಮತ್ತು ಗಮಕಿಯವರನ್ನು ಇದೇ ಸಂದರ್ಭದಲ್ಲಿ ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು. ಕಾರ್ಯಕ್ರಮಕ್ಕೆ ಮುನ್ನ ಕನ್ನಡಸಂಘದ ಮಾಜಿ ಕಾರ್ಯದಶರ್ಿಗಳಾಗಿ ಇತ್ತೀಚೆಗೆ ನಿಧನರಾದ ಬೇಲಾಡಿ ರಾಮಚಂದ್ರ ಆಚಾರ್ಯರ ಗೌರವಾರ್ಥ ಮೌನ ಪ್ರಾರ್ಥನೆಯೊಂದಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಬಾಬು ಶೆಟ್ಟಿ ನಾರಾವಿಯವರು ಕಾರ್ಯಕ್ರಮ ನಿರ್ವಹಿಸಿದರು. ಡಾ. ನಾ.ಮೊಗಸಾಲೆಯವರು ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿ ಸದಾನಂದ ನಾರಾವಿ ವಂದಿಸಿದರು.